“ನೀನು ಯಾಕಿನ್ನು ಮದುವೆಯಾಗಿಲ್ಲ, ಕೆಕ್?”
ಅವರು ಮುರಾತ್ ಯಾಜರ್ನ ಹಿಂದೆ ಬಿದ್ದಿದ್ದರು.
ಮುಸ್ತಫಾ ಫಿಲಿಜ಼್, ನನ್ನ ನಡಿಗೆಯ ಎರಡನೆ ಜೊತೆಗಾರ, ಈ ಭೂಮಿಯ ಮೇಲಿನ ಪ್ರಯಾಣದ ವಿಮಾನ ಚಾಲಕ, ಸ್ವಲ್ಪ ಹಿರಿಯ, ಹೆಚ್ಚು ಶಿಸ್ತಿನ ಮನುಷ್ಯ. ಅವನು ಸುರಕ್ಷಿತವಾಗಿದ್ದ. ಆತ ತಾನು ಹೊಸದಾಗಿ ಛಾಪಿಸಿದ ಮದುವೆಗಂಡು ಎಂದು ಹಳ್ಳಿಯವರಿಗೆ ಹೇಳಿಕೊಳ್ಳಬಹುದಾಗಿತ್ತು. ವಾಸ್ತವವಾಗಿ, ಇಸ್ತಾನ್ಬುಲ್ ನಿಂದ ತನ್ನ ಮಧುಚಂದ್ರವನ್ನು ಮೊಟಕುಗೊಳಿಸಿ ನಮ್ಮ ಜೊತೆ ನಡೆಯಲು ಬಂದಿದ್ದ (ಅವನ ಮದುವೆಯ ಬಗ್ಗೆ ಇದ್ಯಾವ ಮುನ್ಸೂಚನೆ ಕೊಡುತ್ತದೆಯೆಂದು, ಅವನು ಮತ್ತು ಅವನ ತರುಣ ಹೆಂಡತಿ ಮಾತ್ರ ತೀರ್ಮಾನಿಸಬಲ್ಲರು, ಅವಳು ಕಿಕ್ಬಾಕ್ಸಿಂಗ್ನಲ್ಲಿ ಚಾಂಪಿಯನ್.) ಆದರೆ ಒಂಟಿ ಮತ್ತು ಬೊಹೇಮಿಯನ್, ಉದ್ದ ಕೂದಲು ಬಿಟ್ಟುಕೊಂಡಿದ್ದ ೩೦ ವರ್ಷ ನಡು ವಯಸ್ಸಿನ ಮುರಾತ್ನನ್ನು ಯಾರು ಕ್ಷಮಿಸುತ್ತಿರಲಿಲ್ಲ, ಹಾಗೂ ಅವನಿಗೆ ರಕ್ಷಣಾವ್ಯವಸ್ಥೆಯೂ ಇರಲಿಲ್ಲ. ಮಲಗಲು ಉಳಿಯುತ್ತಿದ್ದ ಗುಡಿಸಲಿನವರಿಗೆ ಒಂದು ಗಂಟೆಯ ಒಳಗೆ ತನ್ನ ಹಗರಣಗಳಿಂದ ತುಂಬಿದ ಅವಿವಾಹಿತ ಸ್ಥಿತಿಗೆ ವಿವರಣೆ ನೀಡಬೇಕಿತ್ತು. ಆತ ನಕ್ಕು ಬಿಡುತ್ತಿದ್ದ. ಮುಜುಗರಗೊಳಗಾಗುತ್ತಿದ್ದ. ರೂಢಿಯ ಮದುವೆ ಸಂಬಂಧಗಳ ಪ್ರಸ್ತಾವನೆಗಳನ್ನು ತಳ್ಳಿ ಹಾಕುತ್ತಿದ್ದ. ಹೊಲಗಳ ಕಡೆಯಿಂದ ಅಲಂಕರಿಸಿಕೊಂಡು ಬರುತ್ತಿದ್ದ ಕಟ್ಟು ಮಸ್ತಾದ ಕೈಗಳ ತರುಣಿಯರನ್ನು ವ್ಯಥೆಯ ಕಣ್ಣುಗಳಿಂದ ಎವೆಯಿಕ್ಕದೆ ದೃಷ್ಟಿಸುವುದನ್ನು ನಾನು ಗಮನಿಸುತ್ತಿದ್ದೆ. ತನ್ನ ಪೋಕರಿ ಹೃದಯದ ಜೊತೆ ಗೆಲ್ಲಲು ಹೋರಾಡುತ್ತಿದ್ದ.
Mustafa Filiz
“ನನ್ನ ಮದುವೆಯಾಗಿ 50 ವರ್ಷಗಳು ಸಂದಿವೆ,” ಎಂದಳು ಹಜಾ಼ರೆ ಆಯ್ದಿನ್, ಪಸ್ಲಿ ಎಂಬ ಪರ್ವತ ಠಾಣೆಯ ಹತ್ತಿರದ ಅಜ್ಜಿ, ಮುರಾತ್ನನ್ನು ಛೇಡಿಸಿದಳು. “ಚೆನ್ನಾಗಿತ್ತು, ದೇವರಿಗೆ ನನ್ನ ಧನ್ಯವಾದ. ನನಗೆ ಅನೇಕ ಮೊಮ್ಮಕ್ಕಳಿದ್ದಾರೆ - ಆಹ್, ನಾನು ಅವುಗಳನ್ನು ಎಣಿಸಲಾರೆ. ಮತ್ತೆ ನನ್ನ ಪತಿ ನನಗೆ ಹಣ ನೀಡಬೇಕಿದೆ!”
ಆಕೆಯ ಗಂಡ, ಪೋರ್ಕ್ ಪೈ ಟೋಪಿ ಧರಿಸಿ ಗುಂಡಗಿದ್ದ ಆತನ ಹೆಸರೂ ಸಹ ಮುರಾತ್ ಎಂದು, ನಾಟಕೀಯವಾಗಿ ಗೊಣಗುಟ್ಟಿದ. ಅವರ ಛಾಯಾಚಿತ್ರ ತೆಗೆದುಕೊಳ್ಳಲು ಹೋದಾಗ ಆತ ಹಜಾ಼ರೆಗಾಗಿ ಕುರ್ಚಿಯನ್ನು ಅಣಿಗೊಳಿಸಿದ. ಔಪಚಾರಿಕವಾಗಿ ಅವಳ ಬದಿಯಲ್ಲಿ ನಿಂತ, 19ನೆ ಶತಮಾನದ ಡಗೇರೊ ಟೈಪ್ನ ರೀತಿ.
ಬರ್ಟ್ರಾಂಡ್ ರಸೆಲ್ ಬರೆಯುತ್ತಾನೆ - “ಉತ್ತಮವಾದ ಜೀವನ ಪ್ರೀತಿಯಿಂದ ಸ್ಫೂರ್ತಿಗೊಂಡು ಜ್ಞಾನದಿಂದ ದಿಗ್ಧರ್ಶಿಸಲ್ಪಟ್ಟಿರುತ್ತದೆ.”
ಅನಾಟೋಲಿಯದ ಮೂಲಕ ನಡೆಯುವಾಗ, ಈ ಗಾದೆಗಳು ಬಹಳ ಸುಲಭವಾಗಿ ಅದಲು ಬದಲಾಗುವುದನ್ನು ಕಲಿಯುತ್ತೇವೆ.
ಉತ್ತರದ ಕಂಚಿನ ಬಣ್ಣದ ಹುಲ್ಲುಗಾವಲಿನಲ್ಲಿ ನಾವು ಕಾಲೆಳೆಯುತ್ತಾ ಸಾಗುತ್ತೇವೆ. ಎತ್ತರದ ಮತ್ತು ಕಾಡು ಪ್ರಸ್ಥಭೂಮಿಯ ಮೇಲೆ ರತಿ ಮನ್ಮಥರ ಶಬ್ಧವೇಧಿ ಬಾಣ ಬೀಳುವ ದಿಕ್ಕಿನೆಡೆ: ದೂರದಲ್ಲಿ ಮದುವೆಯ ಮಂಟಪದ ಸಂಗೀತ. ಇಡಿ ಅನಾಟೋಲಿಯವೆ ಮದುವೆಯಾಗುವ ಸಂಭ್ರಮದಲ್ಲಿದೆ. ಕರ್ಡಿಷ್ ಗ್ರಾಮಗಳ ಕಡೆಯಿಂದ ಬೀಸುತ್ತಿರುವ ಒಂಟಿ ಶೀತಗಾಳಿಯ ಬೆನ್ನೇರಿ, ಪಯಿಜೊಕ್ಸ್ ಎಂದು ಕರೆಯುವ ಚಳಿಗಾಲದ ಅಪ್ರಾಸ ಬದ್ದ ಹಾಡುಗಳು ಅಲೆ ಅಲೆಯಾಗಿ ಕೇಳಿಬರುತ್ತಿವೆ. ದಿಲೋಕ್ ಎಂದು ಕರೆಯಲ್ಪಡುವ ಗುಂಪು ನೃತ್ಯದ ಸಿಡಿತದ ಶಬ್ಧವೂ ಕೇಳುತ್ತಿದೆ. ಅಲ್ಲಿ ಜೊಂಡು ವಾದ್ಯಗಳು, ಗಾಯನ ಡಮರುಗಗಳ ಹೃದಯ ಬಡಿತವಿತ್ತು. ಕರ್ಡರು ದಿನಗಟ್ಟಲೆ ನೃತ್ಯ ಮಾಡುತ್ತಾರೆ.
ಈ ಭೂಮಿಯ ಮೇಲೆ ನಡೆಯುತ್ತಿರುವಾಗ ಹಳೆಯದೊಂದು ತೀವ್ರಸೆಳೆತದ ಆಸೆಯೊಂದು ಉದ್ಭವಿಸುತ್ತದೆ. ನಡಿಗೆ, ನೀನು ನಿನ್ನ ಇನಿಯಳ ಮುಖವನ್ನು ಅನ್ವೇಷಿಸುವ ರೀತಿಯಲ್ಲೇ ಪ್ರತಿಯೊಂದು ಹೊಸ ಭೂ ದೃಶ್ಯಗಳು ಇರುವಂತೆ, ಬಾಹ್ಯ ರೂಪ ಲಕ್ಷಣಗಳ ಮೇಲೆ ನವಿರಾಗಿ ನಿನ್ನ ಕೈಬೆರಳುಗಳನ್ನಾಡಿಸುವಂತೆ, ಚಾಂಚಲ್ಯತೆಯಿಲ್ಲದೆ, ತೀವ್ರ ಲಕ್ಷ್ಯವಿಟ್ಟು, ಕಳೆದ ಒಂದೊಂದು ಮೈಲಿಯೂ ಮತ್ತೆ ಬಾರದೆಂಬ ಅರಿವಿನಿಂದ, ಹಿಡಿದಿಟ್ಟುಕೊಳ್ಳಲಾಗದು ಎಂಬ ತಿಳಿವಳಿಕೆಯಿಂದ. ಅತ್ಯುತ್ತಮ ನಡಿಗೆ ಮತ್ತು ಬರಹ ಹೀಗೆಯೇ ಸಂಭವಿಸಬೇಕು. ಕಣ್ಣು ಮುಚ್ಚಿ ಮುಂದಡಿಯಿಡಲು ಆರಂಭಿಸು, ನೀ.
