“ನೀನು ನಮ್ಮ ಹೇಸರಗತ್ತೆಯನ್ನು ಎಲ್ಲಿ ಹಿಡಿದೆ?” ಡೆನಿಜ಼್ ಕಿಲಿಕ್ನನ್ನು ನಾನು ಕೇಳಿದೆ.
“ಟ್ಯಾಕ್ಸಿ ಚಾಲಕ.”
“ಈ ಸರಕು ಸಾಗಿಸುವ ಹೇಸರಗತ್ತೆಯನ್ನು ಎಲ್ಲಿ ಕೊಳ್ಳಬೇಕೆಂದು ಟ್ಯಾಕ್ಸಿ ಚಾಲಕನನ್ನು ಕೇಳಿದೆಯಾ?”
“ಮೊದಲು ನಾನೆಂದೂ ಹೇಸರಗತ್ತೆಯನ್ನು ಕೊಂಡಿರಲಿಲ್ಲ. ಅವುಗಳ ಬಗ್ಗೆ ನನಗೇನೂ ತಿಳಿಯದು. ನಾನೆಲ್ಲಿ ಕೊಳ್ಳಲಿ? ಯಾರಿಗೆ ಗೊತ್ತು? ಆದ್ದರಿಂದ ವಿಮಾನ ನಿಲ್ದಾಣದಿಂದ ನನ್ನನ್ನು ಕರೆತರುತ್ತಿದ್ದ ನನ್ನ ಟ್ಯಾಕ್ಸಿ ಚಾಲಕನನ್ನು ಕೇಳಿದೆ, ನಾ ಆತನಿಗೆ ಹೇಳಿದೆ, ‘ನಗಬೇಡ. ಇದು ಬಹಳ ಗಂಭೀರ ವಿಷಯ. ಹೇಸರಗತ್ತೆಯನ್ನು ನಾನು ಎಲ್ಲಿ ಕೊಳ್ಳಬಹುದು?’”
ಕಿಲಿಕ್, ಎಷ್ಯಾ ಮೈನರ್ನಲ್ಲಿ ನನ್ನ ಸಹಪ್ರಯಾಣಿಕ.
ಟರ್ಕಿಯ ಆಗ್ನೇಯ ದಿಕ್ಕಿನಲ್ಲಿರುವ ಮರ್ಸಿನ್ ಎಂಬ ದೊಡ್ಡ ಕೈಗಾರಿಕಾ ಬಂದರಿನಲ್ಲಿ ನಾವಿಬ್ಬರೂ ಬೇಟಿಯಾಗಿದ್ದು. ಆಗ ತಾನೆ ಸೈಪ್ರಸ್ನಿಂದ ಬಂದ ದೋಣಿಯಿಂದ ಕೆಳಗಿಳಿದಿದ್ದೆ. ಎರಡು ಇ-ಮೇಲ್ ಮತ್ತು ಒಂದು ಫೋನ್ಕಾಲ್ನ ಮೂಲಕ ನಡೆದ ಸಂವಾದದಲ್ಲಿ, ಏಷಿಯ ಟರ್ಕಿಯ ಹೃದಯಭಾಗವಾದ ಅನಾಟೊಲಿಯದ ಮೂಲಕ - 600 ರಿಂದ 700 ಮೈಲಿಯನ್ನು ನನ್ನ ಜೊತೆ ಕಾಲ್ನಡಿಗೆಯಲ್ಲಿ ಕ್ರಮಿಸಲು ಆತ ಒಪ್ಪಿಕೊಂಡಿದ್ದ.
“ಹುಚ್ಚು ಜನ" - ಎಂದ ಆತ - "ಬೇರೆ ಹುಚ್ಚರನ್ನು ಆಕರ್ಷಿಸುತ್ತಾರೆ.”
ಕಿಲಿಕ್ ಒಬ್ಬ ವೃತ್ತಿಪರ ಪ್ರವಾಸಿ ಮಾರ್ಗದರ್ಶಿ, ಒಬ್ಬ ಪ್ರಪಂಚ ಪರ್ಯಟನಗಾರ. (ಹೆಂಡತಿ ಎಲಿಫ್ ಜೊತೆ ಮೋಟಾರ್ಬೈಕ್ ನಲ್ಲಿ 29 ರಾಷ್ಟ್ರಗಳನ್ನು ಸುತ್ತಿದ್ದಾನೆ.) ಈತ ಟರ್ಕಿಯ ಯುರೋಪ್ ಭಾಗಕ್ಕೆ ಸೇರಿದ ಆಧುನಿಕ ಕಾಸ್ಮೊಪಾಲಿಟಿನ್ ರಿಸಾರ್ಟ್ ನಗರ ಬೋಡ್ರಮ್ನಿಂದ ಬಂದವನು. ಆದರೂ ಈತ ಅನಾಟೊಲಿಯ ಪುರಾತನ ವೈಭವಕ್ಕೆ ಶರಣಾದವನು, ದೇಶದ ಶೇಕಡ 90ರಷ್ಟು ಭೂಭಾಗವನ್ನು ಆವರಿಸಿರುವ ಪೂರ್ವದ ಪರ್ಯಾಯ ದ್ವೀಪಭಾಗ ಅನಾಟೊಲಿಯ ಹೆಚ್ಚು ಅನಾವರಣಗೊಂಡಿಲ್ಲ. ಹೋಮರ್ನ ಇಲಿಯಾಡ್ನಲ್ಲಿ ಅಮರರಾಗಿರುವ ಟ್ರೋಜನ್ನರೇ ಅನಾಟೊಲಿಯನ್ನರು ಎಂದು ಕಿಲಿಕ್ ಮಾಹಿತಿ ನೀಡಿದ. ಚಾರಿತ್ರಿಕ ಸಂಟಾಕ್ಲಾಸ್ ಸಹ ಅನಾಟೊಲಿಯದವನು. (ನಾಲ್ಕನೆ ಶತಮಾನದ ಈತ ಮಕ್ಕಳ ಮತ್ತು ಪಾನ್ ಬ್ರೋಕರ್ಗಳ ಸಂತ, 5 ಅಡಿ ಎತ್ತರದವನು ಹಾಗೂ ಮೂಗು ಮುರಿದಿದೆ.) ಪ್ರಪಂಚದ ಇಂಡೊ-ಯುರೋಪಿಯನ್ ಭಾಷೆಗಳು ಸಹ ಅನಾಟೊಲಿಯಾದಲ್ಲಿ ಜನ್ಮವೆತ್ತಿರಬಹುದು. ಅನಾಟೊಲಿಯದ ಅಲೆಮಾರಿಗಳು ವ್ಯವಸಾಯವನ್ನು ಆವಿಷ್ಕರಿಸಿರಬಹುದು. ಅವರ ಚರಿತ್ರೆ ಬಹಳ ಸಂಕೀರ್ಣ. ತಳವಿಲ್ಲದ್ದು, ಕಿಲಿಕ್ ಹೇಳುತ್ತಾನೆ: ಇಂದಿಗೂ ಪುರಾತನ ಕಲಾಕೃತಿಗಳು ಪ್ರತಿದಿನ ನಮ್ಮ ಕಾಲುಗಳಿಗೆ ತೊಡರುತ್ತವೆ ಎಂದು. ಎಲ್ಲಕ್ಕಿಂತ ಹೆಚ್ಚಾಗಿ ಅನಾಟೊಲಿಗಳು ನಿಜವಾದ ತುರುಕರು - ವಿವಿಧ ಮೂಲಗಳ ಬಲಿಷ್ಠ ಹುಲ್ಲುಗಾವಲು ಜನಾಂಗ. ಕಿಲಿಕ್ ಅವರೆಲ್ಲರ ಪ್ರತಿಪಾದಕ. ಬಹಳ ಕಠಿಣ ಅಭಿಪ್ರಾಯಗಳನ್ನು ಹೊಂದಿರುವಾತ. ಅಪಾರ ಜಾಣ್ಮೆಯಿರುವಾತ, ಮೂರ್ಖರನ್ನು ನರಳುವಂತೆ ಮಾಡುತ್ತಾನೆ: ಅವನು ಅವರನ್ನು ಕರೆಯುವುದು "ಅಸಾಧಾರಣ ಬುದ್ದಿವಂತರು" ಎಂದು.
“ಆಗಸ್ಟ್ ನಲ್ಲಿ ನಡೆಯುವುದು ಅತ್ಯಂತ ಶೋಚನೀಯ! ಯಾವ ಬುದ್ದಿವಂತ ಇವುಗಳ ಯೋಜನೆ ತಯಾರಿಸಿದ?”
“ನಾನೆ ಮಾಡಿದ್ದು.”
“ಸೊಗಸಾಗಿದೆ.”
Paul Salopek
ಕೃಷಿ ಭೂಮಿಗಳ ಮೇಲೆ ಹೇಸರಗತ್ತೆಯನ್ನು ಎಳೆದೊಯ್ದೆವು. (ಆಕೆಯ ಬೆಲೆಯಾದ 350 ಡಾಲರ್ ಪ್ರಕಾರ ಆಕೆ ಇತಿಹಾಸ ಪೂರ್ವಕ್ಕೆ ಸೇರಿದವಳು: 22 ವರ್ಷ ವಯಸ್ಸು. ಈ ಪ್ರಾಣಿಯ ಬಗ್ಗೆ ಇನ್ನಷ್ಟು ವಿವರ ನಂತರ.) ಕಿತ್ತಳೆ ಬಣ್ಣದ ಸೂರ್ಯನುದಯಿಸುತ್ತಿರುವಾಗ ಧೂಳಿನಿಂದ ಕೂಡಿದ ಇರಾನಿ ಪ್ರಸ್ಥಭೂಮಿಯ ಕಡೆ ಕಾಲೆಳೆಯುತ್ತಾ ಸಾಗಿದೆವು. ಕುದಿಯುತ್ತಿದ್ದ ಮಧ್ಯಾಹ್ನದಲ್ಲಿ ಕಂಪಿಸುತ್ತಿದ್ದ ಶಾಖದ ಅಲೆಗಳನ್ನು ಕಲಕಿದೆವು. ನಾವು ಟಾರಸ್ ಪರ್ವತಗಳ ನೆರಿಗೆಯ ತಪ್ಪಲಿನಲ್ಲಿ ಹತ್ತಿದೆವು. ಒಣಗಿದ ಸೂರ್ಯಕಾಂತಿ ಹೊಲಗಳ ಮಧ್ಯೆ ಕಾಲೆಳೆಯುತ್ತಾ ಸಾಗಿದೆವು. ಕೈಪಂಪ್ ಬಾವಿಗಳನ್ನು ದಾಟುತ್ತಾ ಧಗೆಯಿಂದ ಕುದಿಯುತ್ತಿದ್ದ ಸಿಲಿಸಿಯಾ ಬಯಲಿಗೆ ಇಳಿದೆವು. ಬಹುಶಃ ಪ್ರಪಂಚದ ಅತ್ಯಂತ ಹಳೆಯ ಕೃಷಿ ಭೂಮಿ ಇರಬಹುದೇನೊ. ಹಳ್ಳಿಯ ಮನೆಗಳ ತಾರಸಿಯ ಮೇಲೆ ಮಲಗಿದೆವು.
ಟರ್ಕಿಯ ಆಗ್ನೇಯ ದಿಕ್ಕಿನಲ್ಲಿ ಇಂದಿಗೂ ಮಿಲಿಯಾಂತರ ಕುಟುಂಬಗಳು ಮನೆಯ ಹೊರಗೆ ಕನಸು ಕಾಣುತ್ತಾರೆ.
ಬೇಸಿಗೆಯ ದಿನಗಳು ಕುಲುಮೆಯಂತೆ. ಕಾಲ್ಕೆಳಗಿನ ನೆಲ ಬೆಂಕಿಯಂತೆ ಚಟಪಟಿಸುತ್ತಿರುತ್ತದೆ. ಮೆಡಿಟರೇನಿಯನ್ ಆರ್ದ್ರತೆಯ ತಾಪಮಾನ ಉಸಿರುಗಟ್ಟಿಸಿ ಕೊಲ್ಲುವಂತೆ: ಶ್ವಾಸಕೋಶಗಳನ್ನು ಬಂದಿಸುತ್ತದೆ; ಬೆವರಿನಿಂದ ಚರ್ಮ ತೋಯ್ದು ತೊಪ್ಪೆಯಾಗುತ್ತದೆ. ಆದರೂ ಸೂರ್ಯಾಸ್ತದ ಸಮಯದಲ್ಲಿ, ರೈತರ ಮನೆಯ ಸಮತಟ್ಟಾದ ತಾರಸಿಯಲ್ಲಿ, ರಹಸ್ಯವಾಗಿರುವ ವಿಷಯಗಳಿವೆ: ತಂಗಾಳಿಯ ಸುಳಿ, ಶಾಖದ ಇಳಿಮುಖ, ಚೇತೋಹಾರಿ ಓಯಸಿಸ್. ಅನಾಟೊಲಿಯನ್ನರು ಪಕ್ಷಿಗಳಂತೆ. ದಿನವೆಲ್ಲ ಹೊಲದಲ್ಲಿ ಗೇಯ್ದಮೇಲೆ ರಾತ್ರಿಯಾಗುತ್ತಿದ್ದಂತೆ ಮನೆಗಳ ಮೇಲೆ ವಿಶ್ರಮಿಸಲು ಹಿಂದಿರುಗುತ್ತಾರೆ. ಭೂಮಿಯಿಂದ 20 ರಿಂದ 30 ಅಡಿ ಎತ್ತರದಲ್ಲಿ ಹಸಿರು ಉಣ್ಣೆಯ ಹಾಸಿನ ಮೇಲೆ ವಿರಮಿಸುತ್ತಾರೆ. (ಟರ್ಕಿಯ ಹಳ್ಳಿಗಾಡಿನೆಡೆಯಲ್ಲಿ ಮನೆಗಳು ಎರಡರಿಂದ ಮೂರು ಅಂತಸ್ತುಗಳಿರುತ್ತವೆ.) ಚಹಾವನ್ನು ಚಪ್ಪರಿಸುತ್ತಾ, ಮನೆಯ ಸುತ್ತಾ ಇರುವ ನೀರಿನ ಟ್ಯಾಂಕ್ಗಳು, ಟೆಲಿವಿಷನ್ ಆಂಟೆನಾಗಳು ಮತ್ತು ಬಟ್ಟೆ ಒಣಹಾಕಿರುವ ತಂತಿಗಳ ಮೂಲಕ ತಮ್ಮ ಹಳೆಯ ಪ್ರಪಂಚವನ್ನು ದಿಟ್ಟಿಸಿ ನೋಡುತ್ತಾರೆ. ಮನೆಯ ಮೇಲೆ, ಮೊಸರು, ಮಾಂಸದುಂಡೆಗಳು ಮತ್ತು ಕಲ್ಲಂಗಡಿ ಹಣ್ಣಿನ ಭೋಜನವಿರುತ್ತದೆ. ಅವರು ಹರಟುತ್ತಾ ನಕ್ಷತ್ರಗಳ ಬೆಳಕಿನಲ್ಲಿ ಪ್ರೀತಿಸುತ್ತಾರೆ. ಅಕ್ಕ ಪಕ್ಕದ ಮನೆಯ ಮೇಲೂ ಸಹ ಇಂತವೆ ಕಾರ್ಯಗಳು ನಡೆಯುತ್ತವೆ. ಬಯಲಿನಲ್ಲಿ ಶಿಬಿರವನ್ನು ಹೂಡಿ ವಿಶ್ರಮಿಸುವಾಗ ಈ ಅಭ್ಯಾಸಗಳ ಅವಶೇಷಗಳು, ಅನಾಟೊಲಿಯದಲ್ಲಿ ಶಿಲಾಯುಗದ ಕಾಲದಿಂದಲೂ ಬದುಕುಳಿದಿವೆ. ಇದು ಬೇಟೆಯಾಡುವ ಮತ್ತು ಸಂಗ್ರಹಿಸುವ ಪ್ರತಿಧ್ವನಿಯಂತೆ - ಪ್ಲೀಸ್ಟೋಸಿನ್ ಕಾಲದ ಇದೇ ಜಾಡನ್ನೇ ನಾನು ಆಫ್ರಿಕಾದಿಂದ ಹಿಂಬಾಲಿಸುತ್ತಾ ಬಂದಿರುವುದು.
Paul Salopek
“ಹಳ್ಳಿಗಳೆಲ್ಲಾ ಅವನತಿಯ ದಾರಿ ಹಿಡಿದಿವೆ,” ಸಮಿ ಗೋರ್ಟುಕ್ ಎಂಬ ರೈತ ಹೇಳಿದ. “ನಮಗೆಲ್ಲಾ ಸರ್ಕಾರ ಇಂಧನವನ್ನು ಸಹಾಯ ದರದಲ್ಲಿ ನೀಡುತ್ತಿದೆ. ಕಡಿಮೆ ಬೆಲೆಯಲ್ಲಿ ಬೀಜಗಳನ್ನು ನೀಡುತ್ತಿದೆ. ಟ್ರಾಕ್ಟರ್ ಕೊಳ್ಳಲು ಸಾಲ ನೀಡುತ್ತಿದೆ. ಆದರೆ ನಮ್ಮ ಮಕ್ಕಳು ಮರ್ಸಿನ್ ಮತ್ತು ಅದಾನಗಳತ್ತ ಕೆಲಸ ಹುಡುಕಿಕೊಂಡು ಹೋಗುತ್ತಿದ್ದಾರೆ.”
ಯುವಕರು ಅನಾಟೊಲಿಯದ ಆಕಾಶವನ್ನು ತೊರೆಯುತ್ತಿದ್ದಾರೆ. ಬಡವರು ಮಾತ್ರ ಬಯಲಿನಲ್ಲಿ ಭೋಜನ ಸವಿದು ಮಲಗುವ ಅವಕಾಶ ಪಡೆದಿದ್ದಾರೆ.
ರೈತಾಪಿಗಳ ದೊಗಳೆ ಬಟ್ಟೆಗಳನ್ನು ಧರಿಸಿದ್ದ, ಗೋರ್ಟುಕ್ ಮತ್ತು ಆತನ ಹೆಂಡತಿ, ಹಯಿರ್ಲಿ, ನಮ್ಮ ಹೇಸರಗತ್ತೆಗೆ ಓಟ್ಸ್ ನ ಮೇವನ್ನು ಕೊಟ್ಟರು. ನಮ್ಮನ್ನು ಮನೆಯ ತಾರಸಿಗೆ ಕರೆದೊಯ್ದು ಬಟ್ಟಲಿನ ತುಂಬ ಬೀನ್ಸ್ ಮತ್ತು ಟೊಮೊಟೊ ಖಾದ್ಯವಾದ ‘ಫಾಸುಲ್ಯೆ’ಯನ್ನು ನೀಡಿದರು. ನಮ್ಮ ಎಲೆಕ್ಟ್ರಾನಿಕ್ ಉಪಕರಣಗಳನ್ನು ರೀಚಾರ್ಜ್ ಮಾಡಲು ಬೇಕಾದ ಉಪಕರಣಗಳನ್ನು ನೀಡಿದರು. ನಾವು ತೀರಾ ಅಪರಿಚಿತರು. ಈ ಉದಾರತೆ, ಉದಾತ್ತ ಕರುಣೆಯ ಮನೋಭಾವ, ನಾನು ನಡೆದ ದಾರಿಯಲ್ಲೆಲ್ಲಾ ಪುನರಾವರ್ತಿಸಿತು. ಗ್ರಾಮೀಣ ಅನಾಟೊಲಿಯನ್ನರು ಪ್ರಪಂಚದಲ್ಲೆ ಅತ್ಯಂತ ಅದ್ಭುತ ಅತಿಥೇಯರು.
ಅವರ ರಕ್ತ ಸಿಕ್ತ ಚರಿತ್ರೆಯನ್ನು ನೋಡಿದರೆ ಇದಂತೂ ಅತ್ಯಂತ ಆಶ್ಚರ್ಯಕರ.
Paul Salopek
ಟರ್ಕಿಯ ಪೂರ್ವಕ್ಕೆ ಇರುವ ಬಯಲು ಭೂಮಿ ಏಷ್ಯಾ ಮತ್ತು ಯುರೋಪ್ನ ಸಂಬಂಧದ ಆಯಕಟ್ಟಿನ ಓಣಿಯಷ್ಟೇ ಅಲ್ಲ. ಅದೊಂದು ಚರಿತ್ರೆಯ ಕೀಲಿಯಂತೆ. ಕಳೆದ 6000 ವರ್ಷಗಳ ಇತಿಹಾಸದಲ್ಲಿ ನಾಗರೀಕತೆಗಳು ಈ ಪ್ರಸ್ಥಭೂಮಿಯ ಮೇಲೆ ಹಿಂದಕ್ಕೆ ಮುಂದಕ್ಕೆ ಓಡಾಡಿವೆ. ಸಶಸ್ತ್ರವಾಗಿ ನಡೆದಿರುವ ವಲಸೆಗಳು, ಅತಿಕ್ರಮಣಗಳು, ವಿಜಯಯಾತ್ರೆಗಳು, ಹಠಾತ್ ದಾಳಿಗಳು, ಹಿಮ್ಮೆಟ್ಟಿರುವಿಕೆ- ಆದರೆ ಅನಾಟೋಲಿಯ ಬಗ್ಗೆ ಬರೆದಿರುವ ಪುಸ್ತಕಗಳು ಈ ಪ್ರಕರಣಗಳಿಗೆ ಸಂಬಂಧವೆ ಇಲ್ಲದಂತೆ, ಜಡತೆಯಿಂದ: “ಇಂಡೋ-ಯುರೋಪಿಯನ್ ಆಕ್ರಮಣಕಾರರ ಒಂದು ಹೊಸ ಅಲೆ ಈ ಭೂಮಿಯ ಮೇಲೆ ಸಾಗಿದ್ದಾರೆ.” ಎಂದಿವೆ.
ಏಕೆಂದರೆ ಈ ಭೂಮಿ ಬಹಳ ಫಲವತ್ತಾಗಿದೆ. ಏಕೆಂದರೆ ಪಶ್ಚಿಮದಲ್ಲಿರುವ ನಾಲ್ಕು ಸಮುದ್ರಗಳಿಗೆ ಈ ಮೂಲಕವೆ ದಾರಿ ಇರುವುದರಿಂದ: ಕಪ್ಪು ಸಮುದ್ರ, ಏಜಿಯನ್ ಸಮುದ್ರ, ಮರ್ಮರಾ ಸಮುದ್ರ. ಮೆಡಿಟರೇನಿಯನ್ ಸಮುದ್ರ. ಅನಾಟೊಲಿಯ ಬಹುಭಾಗ ಸಮತಟ್ಟಾಗಿರುವುದರಿಂದ ರಕ್ಷಿಸಿಕೊಳ್ಳಲು ಅಸಾಧ್ಯ.
"[ಒಂ]ದು ಸಮುದಾಯದ ಕೃಷಿಭೂಮಿಗಳು ಇನ್ನೊಂದು ಸಮುದಾಯದ ಸಂಪರ್ಕಕ್ಕೆ ಬಂದಿವೆ," ಎಂದು ರಾಬರ್ಟ್ ಡಿ. ಕಪ್ಲಾನ್ ತನ್ನ ದಿ ರಿವೆಂಜ್ ಆಫ್ ಜಿಯಾಗ್ರಫಿ: ವಾಟ್ ದಿ ಮ್ಯಾಪ್ ಟೆಲ್ಸ್ ಅಸ್ ಎಬೌಟ್ ಕಮಿಂಗ್ ಕಾನ್ ಫ಼್ಲಿಕ್ಟ್ಸ್ ಅಂಡ್ ದಿ ಬ್ಯಾಟಲ್ ಎಗೈನ್ಸ್ಟ್ ಫೇಟ್, ಎಂಬ ಪುಸ್ತಕದಲ್ಲಿ ಬರೆದ್ದಿದ್ದಾನೆ. "[ತೀ]ವ್ರ ಯುದ್ದಗಳು ನಡೆದಾಗ, ಗಡಿವಿವಾದಗಳನ್ನು ಇತ್ಯರ್ಥಗೊಳಿಸಲು ಅಥವಾ ತೀವ್ರ ಕೊರತೆಯಿದ್ದಾಗ, ನೀರಿನ ಹಂಚಿಕೆ ವಿವಾದಗಳನ್ನು ಮಧ್ಯಸ್ಥಿಕೆ ವಹಿಸಿ ಬಗೆಹರಿಸಲು ಯಾರಿಗೂ ಕೇಂದ್ರಿಕೃತ ಅಧಿಕಾರವಿರಲಿಲ್ಲ."
ಅಕ್ಕಾಡಿಯನ್ನರು ಮತ್ತು ಅಸ್ಸಿರಿಯನ್ನರು ಅನಾಟೊಲಿಯವನ್ನು ಹಕ್ಕಿನ ಬಹುಮಾನವನ್ನಾಗಿ ಪಡೆದಿದ್ದಾರೆ. ಹಾಗೆಯೇ ಹಿಟೈಟ್ಸ್, ಮತ್ತು ಅನಾಟೊಲಿಯ ಮೂಲ ನಿವಾಸಿಗಳು ಅವೆಮಣ್ಣಿನ ತಟ್ಟೆಗಳ ಮೇಲೆ 3500 ವರ್ಷಗಳಷ್ಟು ಹಿಂದೆಯೆ ಕೆತ್ತಿರುವ ಕಾನೂನಿನ ಅಂಶಗಳಲ್ಲಿ ಒಂದು: “ಸ್ವತಂತ್ರ ಮನುಷ್ಯನ ಮೂಗನ್ನು ಯಾರಾದರೂ ಕಡಿದರೆ 40 ಬೆಳ್ಳಿ ಶೆಕೆಲ್ಗಳನ್ನು ಪರಿಹಾರವಾಗಿ ನೀಡಬೇಕು.” ನಂತರ ಫ್ರಿಜಿಯನ್ನರು ಆಕ್ರಮಿಸಿದ್ದಾರೆ, ನಂತರ ಸಿಥಿಯನ್ನರು, ಗ್ರೀಕರು, ನವ - ಅಸ್ಸಿರಿಯನ್ನರು, ಪರ್ಷಿಯನ್ನರು, ಅರ್ಮೆನಿಯನ್ನರು, ಮ್ಯಾಸಿಡೋನಿಯನ್ನರು, ಸೆಲೆಸಿಡ್ಗಳು, ಪಾರ್ಥಿಯನ್ನರು, ಸಸಾನಿಡ್ ಪರ್ಷಿಯನ್ನರು. ಯುಫ್ರೆಟಿಸ್ನೆಡೆಗಿರುವ ಕಲ್ಲು ರಸ್ತೆಗಳ ಮೇಲೆ ರೋಮನ್ನರು ನಡೆದಿದ್ದಾರೆ. ಕ್ರಿಶ್ಚಿಯನ್ ಧರ್ಮ ಅವರನ್ನು ಬೈಜಿಂಟಿನಿಯನ್ನರಾಗಿ ಪರಿವರ್ತಿಸಿದೆ. ನಂತರ ಬಂದಿದ್ದು ಇಸ್ಲಾಮಿನ ಹಸಿರು ದ್ವಜಗಳನ್ನು ಹಿಡಿದ ಅರಬ್ ಸೈನ್ಯ. ವಿಜೇತ ಸೆಲ್ಜುಕ್ ರ (ಮತ್ತು ಅವರ ರಮ್ ಸುಲ್ತಾನೇಟ್) ನ್ನು ಪೂರ್ವದಿಂದ ಕುದುರೆಗಳ ಧಾವಿಸಿಬಂದ ಡೊಂಕು ಕಾಲಿನ ಮಂಗೋಲಿಯನ್ನರು ಅಡಗಿಸಿದರು. ನಂತರ ಸುಮಾರು 600 ವರ್ಷಗಳ ಕಾಲ ನಿರಂತರವಾಗಿ ಓಟ್ಟೊಮನ್ನರು ಆಡಳಿತ ನಡೆಸಿದ್ದಾರೆ. ಅವರ ಕಠಿಣ, ‘ಯುರೋಪಿನ ಅಸ್ವಸ್ಥ ಮನುಷ್ಯ’ ಎಂದೆ ಕರೆಯಲ್ಪಡುವ ಅವರ ಬಹುಜನಾಂಗಗಳ ಬಲಿಷ್ಠ ಸಾಮ್ರಾಜ್ಯವನ್ನು 19ನೇ ಶತಮಾನದ ಮೊದಲನೆ ವಿಶ್ವಯುದ್ಧದ ನೆಪದಲ್ಲಿ ಅಸ್ಥಿರ ಗೊಳಿಸಲಾಯಿತು. ಯುರೋಪಿಯನ್ನರು ಅನಾಟೊಲಿಯವನ್ನು ಚೂರುಚೂರು ಮಾಡಿ ನುಂಗಿದರು. ಆದರೆ ತುರುಕರು ಬಿಟ್ಟುಕೊಡದೆ ಹೋರಾಡಿದರು. ಆಧುನಿಕ ಟರ್ಕಿಯ ಹುಟ್ಟಿನ ಹಿಂದೆ ಅತ್ಯಂತ ಕ್ರೂರ ನಿರ್ದಯವಾದ ಜನಾಂಗಗಳ ಶುದ್ಧೀಕರಣವಿದೆ. (ಕ್ರಿಶ್ಚಿಯನ್ ಅರ್ಮೆನಿಯನ್ನರು, ಗ್ರೀಕರು, ಅಸ್ಸಿರಿಯನ್ನರನ್ನು ಹತ್ಯೆ ಮಾಡಿ ಹೊರದೂಡಲಾಯಿತು ಓಟ್ಟೊಮನ್ ಗಡಿಯೊಳಗೆ ನುಗ್ಗಿದ್ದ ಮುಸ್ಲಿಮ್ ಬೊಸ್ನಿಯನ್ನರು, ಅಲ್ಬೇನಿಯನ್ನರು ಮತ್ತು ಬಲ್ಗೇರಿಯನ್ನರಿಗೂ ಸಹ ಇದೆ ಗತಿಯಾಯಿತು). ಕೇವಲ 90 ವರ್ಷಗಳ ಹಿಂದೆ, ಪಾಶ್ಚಾತ್ಯ ಪೋಷಾಕಿನ ಬಗ್ಗೆ ಅಭಿಮಾನವಿದ್ದ ತೀವ್ರಗಾಮಿ ಟರ್ಕಿ ದಂಡಾಧಿಕಾರಿ - ಮುಸ್ತಫಾ ಕೆಮಾಲ್ ಅಟಾಟುರ್ಕ್ - ಆಧುನಿಕ ರಾಷ್ಟ್ರವನ್ನಾಗಿ ಪರಿವರ್ತಿಸಲು ಪ್ರಯತ್ನಿಸಿದ್ದಾನೆ. ಷರಿಯಾವನ್ನ ನಿಷೇದಿಸಿ, ಮುಲ್ಲಾಗಳ ಧಾರ್ಮಿಕ ಅಧಿಕಾರವನ್ನು ರದ್ದು ಮಾಡಿ, ಹೆಂಗಸರಿಗೆ ಮತದಾನದ ಹಕ್ಕನ್ನು ನೀಡಿ, ಟರ್ಕಿ ಪುರುಷರಿಗೆ ಜೈಲಿನ ಭಯ ಹುಟ್ಟಿಸಿ ಬಲವಂತವಾಗಿ ಅವರ ಟುರ್ಕಿ ಟೋಪಿಗಳನ್ನ ಪಾಶ್ಚಾತ್ಯರ ಫೆಲ್ಟ್ ಹ್ಯಾಟ್ಗಳಿಗೆ ಬದಲಾಯಿಸಿದ. (ದಿ ಹ್ಯಾಟ್ ಲಾ ಆಫ್ 1925.)
Paul Salopek
ಔಟ್ ಆಫ್ ಈಡನ್ ವಾಕ್, ಸಹ, ಅನಾಟೋಲಿಯದ ಪುರಾತನ ಕೀಲಿಯ ಮೇಲೆ ತೂಗಾಡುತ್ತದೆ. ಮುಂದಿನ ಎರಡು ವರ್ಷಗಳವರೆಗೆ, ಬಹುಶಃ ಮೂರು, ನಾನು ಪೂರ್ವದ ಚೀನಾದೆಡೆಗೆ ಚಾರಣಿಸುತ್ತೇನೆ.
ಡೆನಿಜ಼್ ಕಿಲಿಕ್ ಮತ್ತು ನಾನು, ಹಳ್ಳಿಗಳ ಮಸೀದಿ ಗೋಪುರಗಳನ್ನು ಮಾರ್ಗದರ್ಶಕವನ್ನಾಗಿಸಿಕೊಂಡು ಸಂಚರಿಸುತ್ತೇವೆ.
ಕುರುಡಾಗಿಸುವಂತ ಮಧ್ಯಾಹ್ನದ ಬಿಸಿಲಿನಲ್ಲಿ ನಾವು ಮಸೀದಿ ಗೋಪುರಗಳಿಂದ ಪ್ರತಿಧ್ವನಿಸುವ ಶಾಖ ವಿಕೃತ ಪ್ರಾರ್ಥನಾ ಕರೆಗಳ ಜಾಡಿನಲ್ಲೆ ಮುಂದುವರೆಯುತ್ತೇವೆ.
1,900 ವರ್ಷಗಳಷ್ಟು ಹಿಂದೆಯೆ ಕಾಫಿ ಮೇಜುಗಳನ್ನಾಗಿ ಬಳಸುತ್ತಿದ್ದ ಕಾರಿಂಥಿಯಮ್ ಕಂಬಗಳನ್ನು ನಾವು ತತ್ತರಿಸುತ್ತಾ ಬಳಸಿ ನಡೆದೆವು. ಓಪಿಇಟಿ ಸಂಸ್ಥೆಯ ಗ್ಯಾಸ್ ಸ್ಟೇಷನ್ಗಳ ಹವಾನಿಯಂತ್ರಿತ ಚಾಟ್ ಕೋಲ ಕೇಂದ್ರಗಳನ್ನು ದಾಟಿದೆವು. 500 ವರ್ಷಗಳ ಹಿಂದೆ ಚರ್ಚ್ ಗಳಾಗಿದ್ದ ಅದಕ್ಕೂ ಹಿಂದೆ ಯಹೂದಿ ಪ್ರಾರ್ಥನಾ ಮಂದಿರಗಳಾಗಿದ್ದ ಆದರೆ ಇಂದಿನ ಸವೆದು ಹೋಗಿದ್ದ ಸುಣ್ಣದ ಕಲ್ಲಿನ ಮಸೀದಿಗಳನ್ನು ದಾಟಿದೆವು. ಕಬ್ಬಿಣ ಯುಗದ ಕಾಲದ ಅವೆಮಣ್ಣಿನ ಮಡಿಕೆ ಕುಡಿಕೆಗಳು ಹರಡಿದ್ದ ಸಮುದ್ರ ತೀರದ ಮೇಲೆ, ಇನ್ಸಿರ್ಲಿಕ್ ವಾಯುಯಾನದ ಅಡ್ಡೆಯಿಂದ ಹಾರುತ್ತಿದ್ದ ಅಮೇರಿಕಾದ K.C. 135 ಜೆಟ್ ವಿಮಾನಗಳ ನೆರಳಿನಲ್ಲಿ. (ಅವೆಲ್ಲಾ ಇರಾಕ್ನ ಮೇಲೆ ದಾಳಿ ನಡೆಸುತ್ತಿವೆ.) ಮತ್ತು ಹಳ್ಳಿಯ ಚೌಕದಲ್ಲಿ ಮರದ ಕುರ್ಚಿಗಳ ಮೇಲೆ ಕುಳಿತು ಚಿರಂತನವಾದ ಓಕಿ ಎಂಬ ಆಟವನ್ನು ಆಡುತ್ತಿದ್ದ ನೂರಾರು ಮುದಿ ಅನಾಟೊಲಿಯನ್ನರ ನಡುವೆ.
"ನೀನು ಏಕೆ ಇದನ್ನು ಮಾಡುತ್ತಿದ್ದೀಯ?" ಎಂದು ಒಬ್ಬ ಕೇಳಿದ. ತನ್ನ ಕೈಗಳನ್ನು ಆಕಾಶದತ್ತಾ ತಿರುವುತ್ತಾ ಪ್ರಶ್ನಿಸಿದ.
“ಪ್ರತಿದಿನವೂ ನೀನು ಇಲ್ಲಿ ಕುಳಿತು ಓಕಿ ಆಟವನ್ನು ಏಕೆ ಆಡುತ್ತಿರುವೆ?” ನಾನು ಹೇಳಿದೆ.
“ನನಗೆ ಗೊತ್ತಿಲ್ಲ.”
“ನನಗೂ ಗೊತ್ತಿಲ್ಲ” ನಾ ಹೇಳಿದೆ. ಆತ ಒಪ್ಪಿಗೆಯಿಂದ ತಲೆಯಲ್ಲಾಡಿಸಿದ.
